*ವಿಪರ್ಯಾಸ*

ಅಂದ? ಚೆಂದ?
ಅಂದ-ಚೆಂದ ಬರಿ ಚರ್ಮದಾಳಕ್ಕೆ!
ಬಾಹ್ಯ ಸೌಂದರ್ಯ ಬರಿ ಕಣ್ಣಿನಾಳಕ್ಕೆ!
ಅಂದಿದ್ದರು ಅವರೆಲ್ಲರೂ ಹಲವು ಬಾರಿ
ನಾ ನಕ್ಕಿದ್ದೆ.
ಪ್ರತಿ ಬಾರಿಯೂ ನಾ ಸುಮ್ಮನೆ ನಕ್ಕಿದ್ದೆ!
ನಗುವಿನಿಂದಿನ ವ್ಯಂಗ್ಯ ಅವರಿಗೆ ತಿಳಿವುದಾದರೂ ಹೇಗೆ?
ಹ್ಞಾ! ವ್ಯಂಗ್ಯ ನಗುವಲ್ಲದೆ ಮತ್ತೇನು?
ನಿಯತಕಾಲಿಕೆಗಳಲಿ ಬರುವ
ರೂಪದರ್ಶಿಕೆಯರ ಅಂದ-ಚೆಂದ
ಮೈಮಾಟಕ್ಕೆ ಮನಸೋತು
ಗಂಟೆಗಟ್ಟಲೆ ಮನದಲ್ಲೇ
ಜೊಲ್ಲುಸುರಿಸುವವರು
ಬಾಹ್ಯ ಸೌಂದರ್ಯ ಬರಿ ಕಣ್ಣಿನಾಳಕ್ಕೆ
ಎಂದಾಗ ನಾ ನಗದಿರುವುದಾದರೂ ಹೇಗೆ?

ಬಾಹ್ಯ ಸೌಂದರ್ಯ ಕ್ಷಣಿಕ
ಆಂತರಿಕ ಸೌಂದರ್ಯ ಚಿರ
ಅಂದಿದ್ದರು ಅವರೆಲ್ಲರು
ಹಲವಾರು ಬಾರಿ
ಆದರೆ ಕೊನೆಗೆ ವರಿಸಿದ್ದು ಮಾತ್ರ
ಅಂದದ ಹುಡುಗಿಯರನ್ನ!
ಅವರೆಲ್ಲರೂ ವರಿಸಿದ್ದು
ಸುಂದರ ಕನ್ಯೆಯರನ್ನೇ!
ಛೇ! ಅವರು ಹೇಳಿದ್ದು ನಿಜ
ಅವರೆಲ್ಲಾ ಮನಸೋತದ್ದು
ಆಂತರಿಕ ಸೌಂದರ್ಯಕ್ಕೆ!
ಅಂದದ-ಚೆಂದದ
ಚೆಂದುಳ್ಳಿ ಚೆಲುವೆಯರ
ಆಂತರಿಕ ಸೌಂದರ್ಯಕ್ಕೆ!
ಅಂದವಲ್ಲದ ಹುಡುಗಿಯ
ಆಂತರಿಕ ಸೌಂದರ್ಯ
ಅವರಲ್ಲಾರಿಗೂ ಕಾಣದಿದ್ದದ್ದು
ಮಾತ್ರ ವಿಪರ್ಯಾಸ!
ನಾ ಇನ್ನೊಮ್ಮೆ ನಕ್ಕು ಸುಮ್ಮನಾಗಲ?

About ಮಧು_ಸಿರಿ(Madhu_siri)

ನನ್ ಬಗ್ಗೆ ಒಂಚೂರು ;) ಹೆಸರು ಮಧುಶ್ರೀ. ಓದಿದ್ದು engineering ಆದ್ರೆ engineer ಅಲ್ಲ. ಬರವಣಿಗೆ ಬಗ್ಗೆ 'ಅ ಆ ಇ ಈ' ಗೊತ್ತಿಲ್ಲ . ಆದ್ರೂ ಮನಸ್ಸಿಗ್ ಅನ್ಸಿದ್ ಬರ್ಯೋದು ನನ್ ಹವ್ಯಾಸ. ಇಷ್ಟ್ ಸಾಕು ಅನ್ಸತ್ತೆ. ಇದುಕ್ಕಿಂತ ಜಾಸ್ತಿ ಹೇಳ್ಕೊಳ್ಳೊ ಅಂಥದ್ದೇನು ನಾನಿನ್ನು ಸಾಧ್ಸಿಲ್ಲ. ನಿಮ್ಮ 'ಅತ್ಯಮೂಲ್ಯ ಸಮಯಾನ' waste ಮಾಡೊ ಜಾಗ ಇದಲ್ಲ. ಬಿಡುವಿದ್ದಾಗ ಮಾತ್ರ ಮಾತ್ರ ಓದಿ ನನ್ ಕವನ ಮತ್ತೆ ಲೇಖನಗಳನ್ನ :)
This entry was posted in ಈ ಸಮಯ ಕಾವ್ಯಮಯ and tagged , , , . Bookmark the permalink.

Leave a comment